ದಾಶರಾಜ -
ಈ ಹೆಸರು ಮಹಾಭಾರತ ರಾಮಾಯಣ ಎರಡರಲ್ಲೂ ಕಂಡುಬರುತ್ತದೆ. 

ಮಹಾಭಾರತದಲ್ಲಿ ಬರುವ ದಾಶರಾಜನಿಗೆ ಉಚ್ಚೈಶ್ರವಸ್ಸು ಎಂದೂ ಹೆಸರಿದೆ. ಇವನು ಬೆಸ್ತರ ರಾಜ. ಒಮ್ಮೆ ಬೆಸ್ತರು ಮೀನು ಹಿಡಿಯುವಾಗ ಒಂದು ಹೆಣ್ಣು ಮಗು ಸಿಕ್ಕಿತು. ಅದನ್ನು ಅವರು ಈತನಿಗೆ ಒಪ್ಪಿಸಿದರು. ಮುಂದೆ ಆ ಹೆಣ್ಣು ಮಗು ಮತ್ಸ್ಯಗಂಧಿನಿ, ಸತ್ಯವತಿ, ಯೋಜನಗಂಧಿ ಎಂಬ ಹೆಸರುಗಳಿಂದ ಪ್ರಸಿದ್ಧಳಾದಳು. ಪರಾಶರ ಮುನಿಯಿಂದ ಅವಳಿಗೆ ತೇಜಸ್ವಿನಿಯಾದ ಕೃಷ್ಣದ್ವೈಪಾಯನ ಎಂಬ ಮಗ ಹುಟ್ಟಿದ. ಮುಂದೆ ಆಕೆ ಶಂತನು ಚಕ್ರವರ್ತಿಯನ್ನು ಮದುವೆಯಾದಳು.

ರಾಮಾಯಣದಲ್ಲಿ ಗುಹ ಎಂಬ ಹೆಸರಿನಲ್ಲಿ ಪ್ರಸಿದ್ಧನಾಗಿರುವ ದಾಶರಾಜ ಒಬ್ಬ ಬೇಡರ ದೊರೆ, ದಶರಥನ ಆಪ್ತಮಿತ್ರ. ಶೃಂಗಬೇರಪುರ ಇವನ ರಾಜಧಾನಿ. ಶ್ರೀರಾಮ, ಸೀತೆ, ಲಕ್ಷ್ಮಣರು ಅರಣ್ಯವಾಸದಲ್ಲಿದ್ದಾಗ ಈತನ ಆತಿಥ್ಯವನ್ನು ಸ್ವೀಕರಿಸಿ ಇವನ ಸಹಾಯದಿಂದ ಗಂಗಾನದಿಯನ್ನು ದಾಟಿದರು. ಅನಂತರ ಬಂದ ಭರತ ಹಾಗೂ ಅವನ ಸೈನ್ಯವನ್ನೂ ಈತ ಉಪಚರಿಸಿ ನದಿ ದಾಟಿಸಿದ. 
(ಎಚ್.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ